ತಿರುವಾಂಕೂರು ತೀರ ನಿಕ್ಷೇಪ	 -
 	ಇಲ್ಮನೈಟ್, ರುಟೈಲ್, ಸಿಲ್ಲಿಮನೈಟ್, ಮೊನಾಜೈಟ್ ಮತ್ತು ಜಿûರ್ಕಾನ್ ಎಂಬ ಅಪೂರ್ವ ಖನಿಜಗಳು ತಿರುವಾಂಕೂರಿನ ತೀರಪ್ರದೇಶದ ಮರಳಿನಲ್ಲಿ ದೊರೆಯುವುದರಿಂದ ಇವನ್ನು ಒಟ್ಟಾಗಿ ಈ ಹೆಸರಿನಿಂದ ಕರೆಯುವುದುಂಟು.  ಕ್ವಿಲಾನಿನಿಂದ ಉತ್ತರಕ್ಕೆ ನೀಂದಕರದಿಂದ ಕಾಯಕುಲಮ್ ವರೆಗೂ ದಕ್ಷಿಣಕ್ಕೆ ಕನ್ಯಾಕುಮಾರಿ ಜಿಲ್ಲೆಯ ಮನಾವಲಕುರಿಚಿವರೆಗೂ ಈ ಮರಳಿನ ಹರವು ಹಬ್ಬಿದೆ.  ಇದರ ನಿಕ್ಷೇಪವನ್ನು ಮೊದಲಿಗೆ ಪತ್ತೆ ಮಾಡಿದವ ಜರ್ಮನಿಯ ಗಣಿತಂತ್ರವಿದ ಸಿ. ಡಬ್ಲ್ಯು. ಶಾಂಬುರ್ಗ್, ಮನಾವಲಕುರಿಚಿಯಲ್ಲಿ (1909). ಇದೇ ವೇಳೆಗೆ ಬಿಜಲಿ ಬತ್ತಿಗಳ (ಗ್ಯಾಸ್ ಲೈಟ್ ಮ್ಯಾಂಟಲ್) ತಯಾರಿಕೆಗಾಗಿ ಮೊನಾಜೈಟ್ ಖನಿಜದ ಬೇಡಿಕೆ ಏರಲು ಪ್ರಾರಂಭಿಸಿತು.  ಈ ಕಾರಣದಿಂದ ಮರಳನ್ನು ಸಲಾಕೆಗಳಿಂದ ತೋಡಿ ಸಂಸ್ಕರಿಸಿ ಮೊನಾಜೈಟನ್ನು ಬೇರ್ಪಡಿಸಿ ಪರದೇಶಗಳಿಗೆ ರಫ್ತಿಸಲಾಗುತ್ತಿತ್ತು.  ಆ ಹತ್ತು ವರ್ಷಗಳಲ್ಲಿ ಈ ಉದ್ಯಮ ಉಚ್ಛ್ರಾಯ ಸ್ಥಿತಿಗೇರಿತು.  ಆದರೆ ಒಂದನೆಯ ಮಹಾಯುದ್ಧದ ಹೊತ್ತಿಗೆ ವಿದ್ಯುತ್ ದೀಪಗಳು ಹೆಚ್ಚಾಗಿ ಬಳಕೆಯಲ್ಲಿ ಬಂದು ಮೊನಾಜೈಟಿನ ಬೇಡಿಕೆ ಇಳಿಯಿತು.  ಆಗ ಅಧಿಕಾರದಲ್ಲಿದ್ದ ಬ್ರಿಟಿಷರು ಜರ್ಮನರ ವಶದಲ್ಲಿದ್ದ ಈ ಖನಿಜೋದ್ಯಮವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.  1918ರಲ್ಲಿ ಟ್ರಾವಂಕೋರ್ ಮಿನರಲ್ಸ್ ಕಂಪನಿ ಎಂಬ ಬ್ರಿಟಿಷ್ ಖಾಸಗಿ ಸಂಸ್ಥೆ ಇದರ ಸೂತ್ರವನ್ನು ವಹಿಸಿಕೊಂಡಿತು.  ಒಂದೆರಡು ವರ್ಷಗಳ ಬಳಿಕ ಹಾಪಕಿನ್ ಮತ್ತು ಮಿಲಿಯಮ್ ಎಂಬ ಇನ್ನೊಂದು ಬ್ರಿಟಿಷ್ ಖಾಸಗಿ ಕಂಪನಿ ಅಸ್ತಿತ್ವಕ್ಕೆ ಬಂತು.  ಈ ಎರಡೂ ಕಂಪನಿಗಳು ಮನಾವಲಕುರಿಚಿಯಲ್ಲಿ ಕಾರ್ಯನಿರತವಾಗಿದ್ದುವು.  ಇಷ್ಟಾಗುವಾಗ  ಮೊನಾಜೈಟ್ ಖನಿಜದ ಬೇಡಿಕೆ ತೀರ ಇಳಿದು ಹೋಗಿ ಇಲ್ಮನೈಟ್ ಮತ್ತು ರುಟೈಲ್ ಖನಿಜಗಳ ಬೇಡಿಕೆ ಏರಿತು.  ಇದೇ ಸಂದರ್ಭದಲ್ಲಿ ತಿರುವಾಂಕೂರು ಖನಿಜಗಳ ಕಂಪನಿ ಹೊಸ ನಿಕ್ಷೇಪಗಳ ಅನ್ವೇಷಣೆ ನಡೆಸಿದ್ದರ ಫಲವಾಗಿ ತಿರುವಾಂಕೂರಿನ ನಿಕ್ಷೇಪ ಬೆಳಕಿಗೆ ಬಂತು.  1940ರಲ್ಲಿ ಪ್ರಪಂಚದ ಇಲ್ಮನೈಟ್ ಖನಿಜದ ಬೇಡಿಕೆಯ 90% ರಷ್ಟು ಭಾಗ ಇಲ್ಲಿಂದಲೇ ಸರಬರಾಜಾಗುತ್ತಿತ್ತು.  ಆದರೆ ಇತ್ತೀಚೆಗೆ ಇತರ ದೇಶಗಳೂ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದರಿಂದ ಭಾರತದ ಉತ್ಪನ್ನ ಬಹಳಷ್ಟು ಕಡಿಮೆಯಾಗಿದೆ. 

	ತಿರುವಾಂಕೂರು ತೀರದ ಮರಳಿನಲ್ಲಿ ಸಿಗುವ ಖನಿಜಗಳ ಪ್ರಮಾಣವನ್ನು ಇನ್ನುಳಿದ ನಿಕ್ಷೇಪದ ಮರಳಿನೊಡನೆ ಈ ಕೆಳಗಿನ ಪಟ್ಟಿಯಲ್ಲಿ ಹೋಲಿಸಲಾಗಿದೆ : 
						   ಮನಾವಲ
				ಚಾವರ		    ಕುರಿಚಿ		
	ಖನಿಜಗಳು     	(ಕೇರಳ)	        ತಮಿಳುನಾಡು		ಆಸ್ಟ್ರೇಲಿಯ

	ಇಲ್ಮನೈಟ್	     65%-77%	         62%		    21%

	ಜಿûರ್ಕಾನ್		5%-10%	           8%		    42%

	ಗಾರ್ನೆಟ್		…....			8%		   …..
	
	ರುಟೈಲ್			3%-4%		4%		    32%
	
	ಸಿಲ್ಲಿಮನೈಟ್		5%-10% 		2%		   ….

	ಮೊನಾಜೈಟ್		1%-2% 		4%		    ….

	ಬೆಣಚು (ಕ್ವಾಟ್ರ್ಜ್)     11%		           12%		   ….
	

	ಸದ್ಯಕ್ಕೆ ಈ ಮರಳಿನಿಂದ ಇಲ್ಮನೈಟ್ ರುಟೈಲ್, ಜಿಕಾನನ್ ಮತ್ತು ಮೊನಾಜೈಟ್ ಖನಿಜಗಳನ್ನು ಪಡೆದು ಉಪಯೋಗಿಸಲಾಗುತ್ತಿದೆ.  ಇಲ್ಮನೈಟ್ ಖನಿಜದಿಂದ ಟೈಟೇನಿಯಮ್ ಡೈಆಕ್ಸೈಡನ್ನು ಉತ್ಪಾದಿಸಿ ಬಣ್ಣಗಳು, ಪ್ಲಾಸ್ಟಿಕ್, ಕಾಗದ, ರಬ್ಬರ್ ಇತ್ಯಾದಿ ಉದ್ಯಮಗಳಲ್ಲಿ ಬಳಸಲಾಗುತ್ತಿದೆ.  ರುಟೈಲನ್ನು ಬೆಸುಗೆಯ ಸಲಾಕೆಗಳ ತಯಾರಿಕೆಯಲ್ಲಿ, ಜಿûರ್ಕಾನನ್ನು ಅಗ್ನಿ ನಿರೋಧಕಗಳ ತಯಾರಿಕೆಯಲ್ಲಿ ಮತ್ತು ಮೊನಾಜೈಟನ್ನು ಥೋರಿಯಮ್ ಮತ್ತು ವಿರಳ ಭಸ್ಮಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ.  'ಇಂಡಿಯನ್ ರೇರ್ ಅತ್ರ್ಸ್ ಲಿಮಿಟೆಡ್ ಎಂಬ ಸಾರ್ವಜನಿಕ ಸಂಸ್ಥೆ ತಿರುವಾಂಕೂರು ಮಿನರಲ್ಸ್‍ನ್ನು 1965ರಲ್ಲಿ ಪೂರ್ಣವಾಗಿ ವಹಿಸಿಕೊಂಡು ಗಣಿಗಾರಿಕೆ ಮತ್ತು ಇತರ ಸಂಸ್ಕರಣೆಗಳನ್ನು ನಡೆಸುತ್ತಿದೆ. 

	ತಿರುವಾಂಕೂರು ಮರಳಿನ ಮೂಲಶಿಲೆಗಳು ಒಳನಾಡಿನಲ್ಲಿರುವ ರೂಪಾಂತರ ಅಗ್ನಿಶಿಲೆಗಳು, ಪೆಗ್ಮಟೈಟ್ ಇತ್ಯಾದಿ ಅಗ್ನಿ ಶಿಲೆಗಳೆಂದು ತಿಳಿದು ಬಂದಿದೆ.  ಹಿನ್ನಾಡಿನಲ್ಲಿರುವ ಈ ಶಿಲೆಗಳು ಯುಗಯುಗಗಳಿಂದ ಮಳೆ, ಗಾಳಿ, ನದಿಗಳ ಹೊಡೆತಕ್ಕೆ ಸಿಕ್ಕು ಶಿಥಿಲೀಕರಿಸಲ್ಪಟ್ಟು ಸವೆತಕ್ಕೆ ಒಳಗಾಗಿ ಚೂರ್ಣಗೊಂಡು ಸಣ್ಣ ಸಣ್ಣ ಖನಿಜಕಣಗಳ ರೂಪದಲ್ಲಿ ನದಿಗಳ ಪ್ರವಾಹದೊಂದಿಗೆ ಅರಬ್ಬಿ ಸಮುದ್ರಕ್ಕೆ ಸಾಗಿಸಲ್ಪಟ್ಟಿವೆ.  ಮುಖಭೂಮಿಗಳಲ್ಲಿ ನದಿಗಳ ತ್ರಾಣ ಕಡಿಮೆ ಇರುವುದರಿಂದ ಅವು ಹೊತ್ತು ತಂದ ಮರಳನ್ನು ಸಮುದ್ರದ ದಂಡೆಗುಂಟ ಇಳಿಸುತ್ತವೆ.  ಹೀಗೆ ಸಂಚಯಿಸಲ್ಪಟ್ಟ ಮರಳನ್ನು ವರ್ಗೀಕರಿಸುವುದರಲ್ಲಿ ಸಮುದ್ರದ ಅಲೆಗಳು ಸಹಕರಿಸುತ್ತವೆ.  ನೀಂದಕರ ಮತ್ತು ಕಾಯಕುಲಮ್ ಮಧ್ಯದ ಕರಾವಳಿಯಲ್ಲಿ 17,530,680 ಟನ್ ಇಲ್ಮನೈಟ್, 1,274,170 ಟನ್ ರುಟೈಲ್ ಮತ್ತು 121,300 ಟನ್ ಮೊನಾಜೈಟ್ ಖನಿಜಗಳ ಸಂಗ್ರಹವಿದೆ ಎಂದು ಪರಮಾಣು ಶಕ್ತಿ ಆಯೋಗ ಅಂದಾಜು ಮಾಡಿದೆ. (ಎಚ್.ಸಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ